ಆಯೋಗ ನಿವೃತ್ತ ನೌಕರರ ಕುರಿತು ಮಾಡಿರುವ ಶಿಫಾರಸುಗಳು ಹೀಗಿವೆ.
ರಾಜ್ಯ ಸರ್ಕಾರಿ ನೌಕರರ ಚಾಲ್ತಿಯಲ್ಲಿರುವ ವಯೋನಿವೃತ್ತಿಯ ವಯಸ್ಸು 60 ವರ್ಷಗಳಾಗಿರುತ್ತವೆ. ದಿನಾಂಕ 01.07.2008 ರಿಂದ ಜಾರಿಗೆ ಬರುವಂತೆ 58 ರಿಂದ 60 ವರ್ಷಗಳಿಗೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದಲ್ಲಿ ಮತ್ತು ಬಹುತೇಕ ರಾಜ್ಯಗಳಲ್ಲಿ ಜಾರಿಯಲ್ಲಿರುವ ನಿವೃತ್ತಿ ವಯಸ್ಸು 60 ವರ್ಷಗಳೆಂಬುದನ್ನು ಆಯೋಗವು ಗಮನಿಸಿದೆ. ಆದಾಗ್ಯೂ ನಿವೃತ್ತಿ ವಯಸ್ಸು ಕೇರಳದಲ್ಲಿ 56 ವರ್ಷಗಳು ಮತ್ತು ಆಂಧ್ರ ಪ್ರದೇಶದಲ್ಲಿ 62 ವರ್ಷಗಳಾಗಿರುತ್ತದೆ.
ಪಂಜಾಬ್‌ನಲ್ಲಿ ಗ್ರೂಪ್ ಎ, ಬಿ ಮತ್ತು ಸಿ ನೌಕರರಿಗೆ ನಿವೃತ್ತಿ ವಯಸ್ಸು 58 ವರ್ಷಗಳು ಮತ್ತು ಗ್ರೂಪ್-ಡಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳಾಗಿರುತ್ತದೆ. ಸಾಮಾನ್ಯವಾಗಿ, ಆಡಳಿತಾತ್ಮಕ ದೃಷ್ಟಿಯಿಂದ, ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಕ್ಕೆ ಏರಿಸಿ 2 ವರ್ಷಗಳಿಗೆ ಮುಂದೂಡಲ್ಪಡುವುದರಿಂದ ನಿವೃತ್ತಿ ವೇತನದ ಸೌಲಭ್ಯಗಳ ಗಮನಾರ್ಹ ಪಾವತಿ (ನಿವೃತ್ತಿ ಸಮಯದಲ್ಲಿನ ಮರಣ ಮತ್ತು ನಿವೃತ್ತಿ ಉಪದಾನ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತದ ಇಡಿಗಂಟಿನ ಪಾವತಿ), ಮತ್ತು ಇದು ನೌಕರರಿಗೆ, ಮತ್ತೆರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುವ ಅವಕಾಶದಿಂದಾಗಿ ಮತ್ತು ಅಲ್ಪಕಾಲಿಕ ಸಂಪನ್ಮೂಲಗಳ ಬಿಕ್ಕಟ್ಟನ್ನು ಎದುರಿಸುತ್ತಿರುವ ಸರ್ಕಾರಕ್ಕೆ, ಇಬ್ಬರಿಗೂ ಸಂತುಷ್ಟಕರವಾದ ನಿರ್ಧಾರವೆನ್ನಬಹುದು.
ಆದಾಗ್ಯೂ, ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಪ್ರವೇಶ ಹಂತದ ನೇಮಕಾತಿಯ ಹರಿವು ತನ್ನ ಸ್ಥಿರತೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಿರುವುದರಿಂದ, ಈ ವಿಷಯವನ್ನು ಮರುಯೋಚಿಸುವ ಅಗತ್ಯವಿಲ್ಲವೆಂದು ಆಯೋಗವು ಭಾವಿಸುತ್ತದೆ ಮತ್ತು ಸರ್ಕಾರಿ ನೌಕರರ ನಿವೃತ್ತಿಗೆ ಪ್ರಸ್ತುತ ಜಾರಿಯಲ್ಲಿರುವ ವಯೋಮಿತಿಯನ್ನು ಮುಂದುವರೆಸಲು ಶಿಫಾರಸು ಮಾಡಿದೆ.
ನಿವೃತ್ತಿ ವೇತನ: ಪೂರ್ಣ ಪ್ರಮಾಣದ ನಿವೃತ್ತಿ ವೇತನಕ್ಕೆ ಬೇಕಾದ ಕನಿಷ್ಠ ಅರ್ಹತಾದಾಯಕ ಸೇವೆ ಕುರಿತು ಆಯೋಗವು ಮಾಹಿತಿ ನೀಡಿದೆ. ಪ್ರಸ್ತುತ ಪೂರ್ಣ ಪ್ರಮಾಣದ ನಿವೃತ್ತಿ ವೇತನವನ್ನು ಪಡೆಯುವುದಕ್ಕಾಗಿ ಕನಿಷ್ಠ ಅರ್ಹತಾದಾಯಕ ಸೇವೆಯು 30 ವರ್ಷಗಳಿಗೆ ನಿಗದಿಯಾಗಿರುತ್ತದೆ. ದಿನಾಂಕ 11.01.2019 ರಂದು ಇದನ್ನು ರಾಜ್ಯ ಸರ್ಕಾರವು 33 ವರ್ಷಗಳಿಂದ 30 ವರ್ಷಗಳಿಗೆ ಇಳಿಸಿದೆ. ಕನಿಷ್ಠ ಅರ್ಹತಾದಾಯಕ ಸೇವೆಯನ್ನು 30 ವರ್ಷಗಳಿಂದ 25 ವರ್ಷಗಳಿಗೆ ಮತ್ತಷ್ಟು ಇಳಿಸುವಂತೆ ಕೋರಿ ಆಯೋಗವು ಮನವಿಗಳನ್ನು ಸ್ವೀಕರಿಸಿರುತ್ತದೆ.
ರಾಜ್ಯ ಸರ್ಕಾರಕ್ಕೆ ಉನ್ನತ ಮಟ್ಟದಲ್ಲಿ ಅನುಭವಿ ಅಧಿಕಾರಿಗಳ ಅಗತ್ಯವಿದ್ದು ಮತ್ತು ಪ್ರಸ್ತುತ, ಕನಿಷ್ಠ ಅರ್ಹತಾದಾಯಕ ಸೇವೆಯ ವಯಸ್ಸನ್ನು ಮತ್ತಷ್ಟು ಕಡಿತಗೊಳಿಸುವುದು ಆಡಳಿತಾತ್ಮಕವಾಗಿ ಪ್ರಯೋಜನಕಾರಿಯಲ್ಲ ಎಂದು ಆಯೋಗವು ಅಭಿಪ್ರಾಯ ಪಡುತ್ತದೆ. ಸರ್ಕಾರಿ ಸೇವೆಗೆ ತಡವಾಗಿ ಸೇರಿದ ಕಾರಣಕ್ಕಾಗಿ 30 ವರ್ಷಗಳ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಸಲ್ಲಿಸದೇ ನಿವೃತ್ತಿಯಾಗುವ ನೌಕರರು ತಮ್ಮ ಸೇವೆಯ ವರ್ಷಗಳಿಗನುಸಾರ ನಿವೃತ್ತಿ ವೇತನವನ್ನು ಪಡೆಯುವುದರಿಂದ, ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಮತ್ತಷ್ಟು ಇಳಿಸಲು ಯಾವುದೇ ಆಧಾರವಿಲ್ಲ ಎಂದು ಆಯೋಗವು ಭಾವಿಸುತ್ತದೆ. ಆದ್ದರಿಂದ, ಪೂರ್ಣ ಪ್ರಮಾಣದ ನಿವೃತ್ತಿ ವೇತನವನ್ನು ಪಡೆಯುವುದಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ 30 ವರ್ಷಗಳ ಕನಿಷ್ಠ ಅರ್ಹತಾದಾಯಕ ಸೇವೆಯನ್ನು ಮುಂದುವರೆಸಲು ಆಯೋಗವು ಶಿಫಾರಸು ಮಾಡಿದೆ.
ಹೆಚ್ಚುವರಿ ನಿವೃತ್ತಿ ವೇತನ: ಪ್ರಸ್ತುತ, ಹೆಚ್ಚುವರಿ ನಿವೃತ್ತಿ ವೇತನವನ್ನು ಮೂಲ ವೇತನದ ಶೇ.20, ಶೇ.30, ಶೇ.40, ಶೇ.50 ಮತ್ತು ಶೇ.100 ನ್ನು ಅನುಕ್ರಮವಾಗಿ 80-85 ವಯಸ್ಸಿನವರಿಗೆ, 85-90 ವಯಸ್ಸಿನವರಿಗೆ, 90-95 ವಯಸ್ಸಿನವರಿಗೆ, 95-100 ವಯಸ್ಸಿನವರಿಗೆ ಮತ್ತು 100 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರಿಗೆ ಸಂದಾಯ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಕಲ್ಪಿಸಿರುವ ಅವಕಾಶಗಳನ್ನು ಹೋಲುತ್ತದೆ.
ಕೆಎಸ್‌ಜಿಇಎ ಮತ್ತು ಕೆಎಸ್‌ಜಿಆರ್‌ಇಎ ಎರಡೂ ಸಂಘಗಳು, 70 ರಿಂದ 80 ವಯೋಮಾನದವರಿಗೂ ಶೇ.10 ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಸಂದಾಯ ಮಾಡಲು ಕೋರಿರುತ್ತವೆ. ಈ ವಯೋಮಾನದ ನಿವೃತ್ತಿ ವೇತನದಾರರಿಗೆ ಹೆಚ್ಚುವರಿ ನಿವೃತ್ತಿ ವೇತನ ಸೌಲಭ್ಯದ ಈ ಅವಕಾಶವು ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವುದನ್ನು ಆಯೋಗವು ಗಮನಿಸಿದೆ. ಈ ಬೇಡಿಕೆಯು ಪರಿಗಣನೆಗೆ ಅರ್ಹವೆಂದು ಪರಿಗಣಿಸಿ, 70 ರಿಂದ 80 ವರ್ಷಗಳ ವಯಸ್ಸಿನ ಸಮೂಹದ ಪಿಂಚಣಿದಾರರಿಗೆ ಶೇ.10 ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಪಾವತಿಸಲು ಆಯೋಗವು ಶಿಫಾರಸು ಮಾಡಿದೆ.
No comments:
Post a Comment