Followers

Followers somaling m uppar

Sunday, September 1, 2024

ಜೋಳ


ಇಂದಿನ ದಿನಗಳಲ್ಲಿ ತೂಕ ನಿರ್ವಹಿಸುವುದೇ ಬಹುದೊಡ್ಡ ಸಮಸ್ಯೆ. ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ತೂಕ ಇಳಿಕೆ ಮಾಡುವುದು ಅಂತಹ ಕಷ್ಟವೇನಲ್ಲ. ಕಡಿಮೆ ಕೊಬ್ಬಿನಾಂಶವಿರುವ, ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

ಇವುಗಳಲ್ಲಿ ಜೋಳ ಬಹಳ ಮುಖ್ಯವಾದುದು. ಇದೊಂದು ಪೌಷ್ಟಿಕ ಧಾನ್ಯವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ತೂಕ ನಿರ್ವಹಣೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಫೈಬರ್, ಪ್ರೊಟೀನ್ ಮತ್ತು ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಜೋಳವು ತೂಕ ನಷ್ಟ ಆಹಾರಕ್ಕೆ ಅದ್ಭುತ ಸೇರ್ಪಡೆ. ತೂಕ ಇಳಿಕೆಯ ಗುರಿಯನ್ನು ತಲುಪಲು ಪ್ರಯತ್ನ ಪಡುವಾಗ ನಾಲಿಗೆ ರುಚಿ ಹುಡುಕಬಹುದು. ಹೀಗಾಗಿ ರುಚಿಕರವಾದ ಹಾಗೂ ಆರೋಗ್ಯಕರವಾದ ಜೋಳ ಪಾಕವಿಧಾನಗಳನ್ನು ಪ್ರಯತ್ನಿಸಬಹುದು. ಜೋಳ ರೆಸಿಪಿಗಳು ಇಲ್ಲಿವೆ:


ಜೋಳ ತರಕಾರಿ ಖಿಚಡಿ


ಬೇಕಾಗುವ ಪದಾರ್ಥಗಳು: ಜೋಳ- 1 ಕಪ್, ಹೆಸರು ಬೇಳೆ- 1/2 ಕಪ್, ಮಿಶ್ರ ತರಕಾರಿಗಳು (ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆ)- 1 ಕಪ್, ಜೀರಿಗೆ- 1 ಟೀ ಚಮಚ, ಅರಿಶಿನ ಪುಡಿ- 1/2 ಟೀ ಚಮಚ, ಗರಂ ಮಸಾಲಾ- 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ- 1 ಚಮಚ, ನೀರು- 3 ಕಪ್.

ಮಾಡುವ ವಿಧಾನ: ಜೋಳ ಮತ್ತು ಬೆಲ್ಲವನ್ನು ತೊಳೆದು, ಕನಿಷ್ಠ 1 ಗಂಟೆ ನೆನೆಸಿಡಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜೀರಿಗೆ ಹಾಕಿ. ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ, ಕೆಲವು ನಿಮಿಷಗಳ ಕಾಲ ಹುರಿಯಿರಿ. ಈ ಮಿಶ್ರಣಕ್ಕೆ ನೆನೆಸಿದ ಜೋಳ, ಹೆಸರು ಬೇಳೆ, ಅರಿಶಿನ ಪುಡಿ, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಂತರ 3 ಕಪ್ ನೀರು ಸೇರಿಸಿ, ಕಡಿಮೆ ಉರಿಯಲ್ಲಿ ಬೇಯಿಸಿ. ಕೊನೆಯದಾಗಿ ಬೇಕಿದ್ದರೆ ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಹಾಕಬಹುದು.


ಜೋಳದ ದೋಸೆ


ಬೇಕಾಗುವ ಸಾಮಗ್ರಿ: ಜೋಳದ ಹಿಟ್ಟು- 1 ಕಪ್, ಗೋಧಿ ಹಿಟ್ಟು- 1/2 ಕಪ್, ಈರುಳ್ಳಿ- 1/2 ಕಪ್, ದೊಣ್ಣೆ ಮೆಣಸು- ½ ಕಪ್, ಪಾಲಕ್- ½ ಕಪ್, ಮಜ್ಜಿಗೆ- 1/2 ಕಪ್, ಮೊಟ್ಟೆ- 1 (ಬೇಕಿದ್ದರೆ ಮಾತ್ರ), ಬೇಕಿಂಗ್ ಪೌಡರ್- 1/2 ಟೀಚಮಚ, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಆಲಿವ್ ಎಣ್ಣೆ- 1 ಚಮಚ.


ಮಾಡುವ ವಿಧಾನ: ಒಂದು ತಟ್ಟೆಯಲ್ಲಿ ಜೋಳದ ಹಿಟ್ಟು, ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಉಪ್ಪು ಮತ್ತು ಮೆಣಸಿನ ಪುಡಿ ಮಿಶ್ರಣ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ದೊಣ್ಣೆ ಮೆಣಸಿನಕಾಯಿ, ಪಾಲಕ್ ಸೇರಿಸಿ. ಜೊತೆಗೆ ಮಜ್ಜಿಗೆ ಹಾಗೂ ಮೊಟ್ಟೆ (ಬೇಕಿದ್ದರೆ ಮಾತ್ರ) ಸೇರಿಸಿ, ಮಿಶ್ರಣ ಮಾಡಿ. ಇನ್ನೊಂದೆಡೆ ನಾನ್ ಸ್ಟಿಕ್ ಪ್ಯಾನ್ ಅನ್ನು ಸ್ವಲ್ಪ ಆಲಿವ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಮಿಶ್ರಣ ಮಾಡಿಟ್ಟಿರುವ ಹಿಟ್ಟನ್ನುದೋಸೆಯಂತೆ (ದಪ್ಪಗೆ) ಹರಡಿ. ಎರಡೂ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಬೇಯಿಸಿ, ಮೊಸರು ಅಥವಾ ಸಲಾಡ್‍ನೊಂದಿಗೆ ಬಡಿಸಬಹುದು.


ಜೋಳದ ಸಲಾಡ್


ಬೇಕಾಗುವ ಪದಾರ್ಥಗಳು: ಬೇಯಿಸಿದ ಜೋಳ- 1 ಕಪ್, ಕತ್ತರಿಸಿದ ಸೌತೆಕಾಯಿ- 1 ಕಪ್, ಟೊಮೆಟೊ- ½, ಈರುಳ್ಳಿ- 1/4 ಕಪ್, ಕೊತ್ತಂಬರಿ ಸೊಪ್ಪು- 1/4 ಕಪ್, ನಿಂಬೆ- 1, ಆಲಿವ್ ಎಣ್ಣೆ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ.


ಮಾಡುವ ವಿಧಾನ: ಒಂದು ಬೌಲ್‍ನಲ್ಲಿ ಸಣ್ಣಗೆ ಕತ್ತರಿಸಿದ ಸೌತೆಕಾಯಿ, ಟೊಮೆಟೊ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಜೊತೆಗೆ ಬೇಯಿಸಿದ ಜೋಳವನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಒಂದು ನಿಂಬೆಯಿಂದ ರಸ ಹಿಂಡಿ ಹಾಕಿ. ಇದಕ್ಕೆ ಆಲಿವ್ ಎಣ್ಣೆ, ಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.


ಜೋಳದ ಇಡ್ಲಿ


ಬೇಕಾಗುವ ಪದಾರ್ಥಗಳು: ಜೋಳದ ಹಿಟ್ಟು- 1 ಕಪ್, ಅಕ್ಕಿ ಹಿಟ್ಟು- 1/2 ಕಪ್, ಮೊಸರು- 1/2 ಕಪ್, ಅಡುಗೆ ಸೋಡಾ- 1/2 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ನೀರು- 1/2 ಕಪ್ (ಅಗತ್ಯವಿರುವಷ್ಟು), ಅಡುಗೆ ಎಣ್ಣೆ


ಮಾಡುವ ವಿಧಾನ: ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೊಸರು, ಅಡುಗೆ ಸೋಡಾ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಇಡ್ಲಿ ಹಿಟ್ಟಿನ ಹದಕ್ಕೆ ನೀರು ಸೇರಿಸಿ. ನಂತರ ಇಡ್ಲಿ ಅಚ್ಚುಗಳಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ. ನಂತರ ಸ್ಟೀಮರ್‌ನಲ್ಲಿ ಇಡ್ಲಿ ಬೇಯಿಸಿ. ಚಟ್ನಿ ಅಥವಾ ಸಾಂಬಾರ್ ಜೊತೆ ಬಿಸಿಯಾಗಿ ಬಡಿಸಿ.


ಜೋಳದ ಸೂಪ್


ಬೇಕಾಗುವ ಪದಾರ್ಥಗಳು: ಜೋಳ- 1/2 ಕಪ್, ತರಕಾರಿಗಳು (ಕ್ಯಾರೆಟ್, ಕೊತ್ತಂಬರಿ ಸೊಪ್ಪು, ದೊಣ್ಣೆ ಮೆಣಸಿನಕಾಯಿ)- 1 ಕಪ್, ಬೆಳ್ಳುಳ್ಳಿ ಪುಡಿ- 1/2 ಟೀ ಚಮಚ, ಈರುಳ್ಳಿ ಪುಡಿ- 1/2 ಟೀಚಮಚ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ, ಆಲಿವ್ ಎಣ್ಣೆ- 1 ಚಮಚ


ಮಾಡುವ ವಿಧಾನ: ಜೋಳವನ್ನು ತೊಳೆದು ಬೇಯಿಸಿ. ಪ್ರತ್ಯೇಕ ಬಾಣಲೆಯಲ್ಲಿ, ಆಲಿವ್ ಎಣ್ಣೆಯನ್ನು ಹಾಕಿ, ಅದಕ್ಕೆ ಸಣ್ಣಗೆ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಮೃದುವಾಗುವವರೆಗೆ ಹುರಿಯಿರಿ. ಇದಕ್ಕೆ ಜೋಳ ಜೊತೆಗೆ ಅದನ್ನು ಬೇಯಿಸುವಾಗ ಉಳಿದಿರುವ ನೀರನ್ನು ಸೇರಿಸಿ. ಇದಕ್ಕೆ ಬೆಳ್ಳುಳ್ಳಿ ಪುಡಿ, ಈರುಳ್ಳಿ ಪುಡಿ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ. 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಬಿಸಿ ಬಿಸಿಯಾಗಿ ಬಡಿಸಿ.



No comments:

Post a Comment